ಕನ್ನಡದಲ್ಲಿ ಬರೆದು ಹುಡುಕಿ

ಕಥಾಕಾಲಕ್ಷೇಪ

ಅಂತವರಿಂತವರು
ನಿಂತವರೆಂತವರು
ಅಂತೆ ಕಂತೆ ಶುರು
ಮಂಥನ ಬಲು ಜೋರು

ಪಂಥಕೆ ಇಳಿವವರ್ಯಾರು
ಚಿಂತೆಯೊಳಿಳಿದಿಹರಿವರು
ಕುಂತರೂ ನಿಂತರೂ ಶುರು
ಚಿಂತಕರಾಗಿಹರೀ ಜನರು

ಹಣವನು ಚೆಲ್ಲುವನಾರು
ಬಣಗಳ ಒಡೆಯುವನಾರು
ಜಾಣತೆ ಅದೆ ಎನ್ನುವರು
ಗಣಿತವ ಮಾಡುತಲಿಹರು

ಸ್ವಜಾತಿಜನ ಪ್ರಿಯನಾರು
ವಿಜಾತಿಯವನು ಯಾರು
ರಾಜಕೀಯದ ಬೇರು
ಈ ಜನಗಣಿತದ ಉಸಿರು.

ವಿದ್ಯೆ ಬುದ್ಧಿಗಳಿರಲಿ
ಆದ್ಯತೆ ಸಾಧನೆಯಿರಲಿ
ಸಾಧ್ಯವೇ ಇಲ್ಲ ಗೆಲಲಿಲ್ಲಿ
ವೇದ್ಯವೆನುತಿಹರಿವರು.

ಭ್ರಷ್ಟರಾದರೂ ಕೂಡ
ಇಷ್ಟ ಪಡುವರ ನೋಡ
ಕಷ್ಟಜೀವಿಯು ಕುರುಡ
ನಿಷ್ಠತೆ ಹಿಡಿಸಿತು ಮೋಡ

ಯಾರಿಗೆ ಮಠಗಳ ಒಲವು
ಯಾರದು ಮಾತಿನ ಚೆಲುವು
ಯಾರಿಗೆ ಇಲ್ಲಿ ಗೆಲುವು
ಅರಿತಿಹರೆಲ್ಲಾ ಸುಳಿವು.

ಕಳೆದಿಹ ನಿನ್ನೆಯ ಕುರಿತು
ದಳ್ಳುರಿಯೆಲ್ಲಾ ಮರೆತು
ಕಳೆಯಲು ಕಾಲವ ಕುಳಿತು
ಒಳ್ಳೆ ಕುರುಕಲು ಮೆಲುಕು.

ಪ್ರಳಯ_ಹಂತಕ....

ನಾವಿರುವ ಅವನಿಯೊಳು
ಭವಸಾಗರದಲಿ ಧಾವಿಸುತಿರುವ
ನಾವೆಯನು ನಾವೇರಲು
ಅವನೂ ಇರುವ ಇವನೂ ಇರುವ
ದೇವನೆ ನಾವಿಕನಾಗಿರುವ.
ಅವನಿಚ್ಛೆಯೊಳೆಲ್ಲಾ ಜೀವ ಶಿವ.

ನಾವೆಲಿ ಕಾಲವ ಸವೆಯಿಸಲು
ಕಾವೇರಿರುವ ಮಾತುಗಳು
ಅವರಿವರೊಳಗೆ ಅವಿತಿರುವ
ನೋವುಂಡಿರುವ ಭಾವಗಳು
ಸಾವಿರ ಸಾವಿರ ಪಂಥಗಳು
ಆವಿರ್ಭವಿಸಿತು ನಾವೆಯೊಳು

ಅವರಿವರೊಳಗೂ ಅವಿತಿರುವ
ಅವನೇ ನಾವಿಕನಾಗಿರುವ
ಕಾವನು ಅವನೆ ಜವನೂ ಅವನೆ
ಇವರೊಳಗುದಿಸಿದ ಭಾವವೂ ಅವನೆ
ಜೀವ ಜೀವಗಳ ಸಮತೋಲನ ತಪ್ಪಿಸಿ
ನಾವೆಯ ಮುಳುಗಿಸೆ ಅವತರಿಸಿದನೆ

ಅವನಿಯನುಳಿಸುವ ಭಾವವೆ ಪ್ರೀತಿ
ಸವಿಯುತಲಿರಲದೆ ಜೀವಿಸೊ ರೀತಿ
ನಾವಿಕಗಿಲ್ಲ ತೊಯ್ದಾಟದ ಭೀತಿ
ನಾವೆಯ ಚಲನೆಯ ಗತಿಗದೆ ಸ್ಫೂರ್ತಿ
ಭುವಿಯೊಳಗುಳಿಸುತ ಜೀವಿ ಸಂತತಿ
ಭವಸಾಗರ ದಾಟಿಪ ನಾವೆಯ ಅಧಿಪತಿ.

ಭಾರತ ನಾರಿ

ನೀಲನಭದಲಿ ಹೊಳೆವ ಕಾಯವು
ಇಳಿದು ಬಂದರೂ ಬಳಿಗೆ ನಿಂದರೂ
ಖಾಲಿ ಹಣೆಯಲಿ ನಿಲುವೆನೆಂದರೂ
ಒಲ್ಲೆನೆನ್ನುವೆ ತೊಲಗು ಎನ್ನುವೆ

ತಾರೆ ಸಂಕುಲ ಸೇರಿ ಮಾಲೆಯ
ಹಾರವಾಗುತ ತುರುಬ ಗಂಟನು
ಸೇರಬಂದರೂ ದೂರ ಓಡುತ
ಜಾರಿಕೊಳ್ಳುವೆ ದೂರ ನಿಲ್ಲುವೆ

ಮುಂದೆ ಕತ್ತಲು ಹಿಂತಿರುಗಿ ನೋಡಲು
ಸಂದ ದಿನಗಳ ಬೆಳಕು ಹೊಳೆಯಲು
ಕೆಂಡದಂತೆಯೆ ಸುಡುತಲಿದ್ದರೂ
ಹೊಂದಿಕೊಳ್ಳುವೆ ಚಂದವೆನ್ನುವೆ

ಸ್ವರ್ಗಸುಖಗಳ ತೋರಿದಿನಿಯನು
ಸ್ವರ್ಗಸ್ಥನಾದನು ತೊರೆದನೆನ್ನನು
ದುರ್ಗಕಟ್ಟಿಹ ವರ್ಗದ ಜೊತೆ ಸು
ದೀರ್ಘ ಪಯಣದ ಮಾರ್ಗ ಸವೆಸುವೆ

ನೆನಪಿನಲೆಯಲಿ ಒನಪು ತೇಲುತ
ನೆನಪಲುಳಿಯದೇ ದೂರ ಸಾಗುತ
ಮನಸಿನಂಗಣ ನೆನಪಿನಂಗಣ
ಕನಸಿಗೆಲ್ಲಿದೆ ಜಾಗ ಈ ಕ್ಷಣ

ರಾಜಕಳೆ

ಕಲಾವಿದರಿಗಿದೆ ಬೆಲೆ
ಎಲ್ಲೆಡೆಗೂ ಸಲ್ಲುವರು
ಕಲೆಗೆ ಎಲ್ಲೆಗಳೆಲ್ಲಿ ದೇಶಭಾಷೆಗಳೆಲ್ಲಿ
ಗೆಲುವಿನಾಸೆಗೆ ಇವನೂ
ಕಲೆಯೊಂದ ಕಲಿತಿಹನು
ಮೂಲೆ ಮೂಲೆಯ ಜನರ ಓಲೈಸಲೆಂದು.

ಆಳಿ ಅಳಿಯದೇ ಉಳಿದ
ಬಾಳಬೆಳಕಂತಿರುವ
ಹಳೆಯ ತಿಳಿಮನಗಳುಲಿ ಕಲಿತವನೇನಲ್ಲ
ಬಳಗವಿದೆ, ಹಾಳೆಯೊಳು
ಇಳಿಸಿ ಕಳುಹುವರದನು
ಹೇಳಿದರಾಯಿತು ಓದಿ ತಿಳಿಯಬೇಕಿಲ್ಲ

ಜಾತಿ ಮತ ಪಂಥಗಳ
ಮತಿಗಳೊಳಗಿಳಿಯೆ
ಪ್ರೀತಿಯಾಗುವ ರೀತಿ ಮಾತನಾಡುವನು
ಹಿತವೆನಿಸೊ ರೀತಿಯಲಿ
ಪ್ರತಿಕ್ರಿಯೆಯ ಕಾತರಕೆ
ಪ್ರತಿಕ್ಷಣಕೂ ಬದಲಾಗೊ ವೇಷಭೂಷಣವು.

ಗುಲ್ಲು ಗದ್ದಲ ಮಾಡಿ
ಚೆಲ್ಲಿದ ನೆತ್ತರಲಿ ನಿಂದು
ಎಲ್ಲರನು ಬೇಡುವನು ಗೆಲಿಸಿಕೊಡಿರೆಂದು
ಬಲ್ಲ ಕಲೆಗಾರರಿಗೆ
ಒಲ್ಲದಿಹ ಕಲೆಗಳಿವು
ಎಲ್ಲ ರಾಜಕಲೆಗಳಿವು ದಿಲ್ಲಿಗದ್ದುಗೆಗೆ.

ಸೋಲಿಲ್ಲದ ಸರದಾರ

ದೂರದೂರಿನಲಿ ಕೆಲಸ ಕಾರ್ಯದಲಿ
ಇರುವನವಳ ಗಂಡ
ಊರ ಸರದಾರ ರಾಜಗಂಭೀರ
ನಾರಿಯಂದದಲಿ ಬೆಂದ
ಕರುಣೆ ತೋರಿಸುತ ನೆರವ ನೀಡೊ ನೆಪ
ಆರೇಳು ಬಾರಿ ನಡಿಗೆ
ದಾರಿ ಸವೆಯುತಿದೆ ಸಾರಿ ಸಾರಿ ಸುಂ-
-ದರಿಯ ಮನೆಯ ಕಡೆಗೆ
ಜಾರಿ ಬಿದ್ದವಳು ಸೇರಿ ತೋಳುಗಳ
ಸೀರೆ ಕಳೆವಳೆಂಬ
ಅರಸನಾಸೆಗಳು ದೂರವಾಗುತ್ತಿತ್ತು
ಗರತಿಗೇಕೋ ಜಂಭ.
ಮಾರನಾಣತಿಯು ಜೋರು ಜೋರಾಗಿ
ಕೋರಿಕೊಂಡನವಳ
ನಾರಿ ಕರದಿಂದ ಮೋರೆಗಪ್ಪಳಿಸೆ
ಉರುಳಿಸಿದ ಬೇರೆ ದಾಳ.
ನಾರಿ ಕರೆವಳೆಂದು ಊರ ಜನರೊಳಗೆ
ಹರಡುತಿದ್ದ ಸುಳ್ಳು
ಭೂರಿ ಭೋಜನವು ದೊರೆತ ಜಿಹ್ವೆಗಳು
ಸುರಿಸುತಿತ್ತು ಜೊಲ್ಲು
ಊರು ಕೇರಿಯಲೂ ದಾರಿ ನಡುವಿನಲು
ಹರಡುತಿತ್ತು ಸುದ್ದಿ
ಜಾರ ಅರಸನಿಗೆ ಕರವ ಮುಗಿಯುತಲಿ
ಮರೆತರವರ ಬುದ್ಧಿ
ಬೆರೆಯಲಿನ್ನೆಂತು ದೂರದಿನಿಯನಿಗೆ
ಅರುಹಳವಳು ದಿಟವ
ಕರೆಸಿಕೊಂಡವನು ಒರೆಸಿ ಕಣ್ಣೀರ
ಮರೆಸುತಿಹನವಳ ದುಃಖವ
ಊರ ನಡುವಿನಲಿ ನೂರು ಕಥೆಗಳಿವೆ
ಅರಿಯರವಳ ಗೋಳ
ಊರ ಅರಸನಿಗೆ ಸೆರಗು ಹಾಸಿದ
ಜಾರೆಯೆಂಬರವಳ.
ಕೋತಿಯೂಟವನು ಒರೆಸೊ ಬಾಲಕ್ಕೆ
ಮತಿಗಳೆಲ್ಲಿ ಇಹುದು.
ರೀತಿ ನೀತಿಗಳ ತಿಂದು ಹೊಲಸಾದ
ಮೂತಿಯೊರೆಸುತಿಹುದು.

ನನ್ನವಳಲ್ಲಿ ನಿವೇದನೆ.....

ಕನ್ನಡಿಯಾಗಲಿ ಕಣ್ಣು,ಎನ್ನುವುದನ್ನು...,
ಎಂದೆಂದಿಗೂ ಬಯಸೆನು ನಾನು,
ನಂಬು ನನ್ನನ್ನು...ಕನ್ನಡಿಯಾದರೆ ಕಣ್ಣು,ಅಲ್ಲಿರುವ ನೀನು....ಕಣ್ಣೊಳಗುಳಿಯುವುದಿಲ್ಲತುಸು ಸರಿದರೂ ನೀನು.....ಕಣ್ ಗಾಜಿನ ಹಿಂಬದಿಗೆ,
ಕೆಂಬಣ್ಣವ ಬಳಿದು....
ಕಣ್ಮರೆಯಾದರೆ ನೀನು,
ಆ ಬಣ್ಣವು ಉಳಿದು....
ಪ್ರತಿಫಲಿಸದೇ ತಾನು,
ಎದುರಾದವರನ್ನು....
ನಾ ಬಯಸೆನು ಅದನು
ನಿನ್ನುಳಿದನ್ಯರನು...
ಉಸಿರಿನ ಒಳಗೆ ಉಸಿರಾಗಿ,
ಹಸಿರಾಗಿರು ನೀನು....
ಜೊತೆಯಾಗಿರುವುದು ನಿನ ಬಿಂಬ,
ನನಗದೆ ಸಾಕಿನ್ನು....
ನನ್ನಯ ಉಸಿರಿನ ಕೊನೆತನಕ
ನನ್ನೊಳಗೆ ನೀನು...
ನನ್ನಯ ಪ್ರಾಣವೇ ಆಗಿರುವೆ,
ತೊರೆಯುವೆನೆ ನಾನು.....

ಶ್ರೀ ಗಿರೀಶ ಭಾರಧ್ವಾಜರಿಗೆ ನುಡಿನಮನ.

ಶ್ರೀ ಗಿರೀಶ ಭಾರಧ್ವಾಜರು 
ಭಾರತಮಾತೆಯ ವರಪುತ್ರರು
ತಾರೆಯ ತೆರದಲಿ ಮಿರುಗುವರು 
ಹರಿಯುವ ನದಿಗೆ ತೂಗುಸೇತುವೆ
ನಿರ್ಮಿಸಿ ನರರಿಗೆ ನೀಡಿದರು
ಕರಗಳ ಮುಗಿಯಲು ಯೋಗ್ಯರು.
ತಾಯಿ ಭಾರತಿಯ ಆಯಕಟ್ಟಿನಲಿ
ಪಯನಿಧಿ ದಾಟುವ ಭಯಗಳಿಗೆ
ಕಾಯುತಲಿರುವಾ ಮನಗಳಿಗೆ
ಕಾಯಕಯೋಗಿಯ ಕಾಯಕದಿಂದಾ
ಭಯಗಳು ಕಳೆದು ಧೈರ್ಯ ಮೂಡಿತು
ಬಯಸಿದ ಭಾಗ್ಯ ಕೈಯ ಸೇರಿತು.
ಅಡವಿಯ ಜಾಡನು ನಾಡಿನ ಹಾದಿಗೆ
ಸಂಧಿಸಿ ಬಂಧನ ಬಿಡಿಸುವರು
ಬಡವರ ಬಂಧು ಇವರು
ಮುಂದಿನ ಪೀಳಿಗೆ ಸಾಧನೆ ಹಾದಿಯ
ಅಡೆತಡೆ ಕಳೆಯುವ ಸಾಧಕರು
ಬದುಕನು ನೀಡಿದ ದೇವರು.
ಶಾಂತಿ ಸಹನೆಯ ಕಾಂತಿಯ ನಗುವಿನ
ಪ್ರೀತಿ ಪ್ರೇಮದ ಮಾತುಗಳು
ನೀತಿ ನ್ಯಾಯದ ಕಥನಗಳು
ಹತ್ತಿರವಿದ್ದರೆ ಮಠಗಳ ಮರೆಸುವ
ಕಾಂತಿಯ ತೇಜದ ಯತಿಯಿವರು
ಸತ್ಯ ತ್ಯಾಗದ ದೂತರು.

ಸುಂದರ ಸಂಜೆಯಲಿ ನಂದನವನದಲ್ಲಿ

ಸುಂದರ ಸಂಜೆಯಲಿ
ನಂದನವನದಲ್ಲಿ
ಬಂದು ನಿಂದಿರಲು
ತೊಂದರೆ ಕೊಡಲು
ಬಂದ ಸೊಳ್ಳೆಗಳೇ
ಇಂದು ಹಿಂದಿರುಗಿದರೂ
ಮುಂದೆ ಎಂದಾದರೂ
ಬಂದೇ ಬರುವೆ
ಗಂಧ ಪೂಸಿಯಾದರೂ
ಅಂದ ಸವಿಯಲು
ಛೆ,
ಮಂದಮತಿಯಾದೆ
ಗಂಧ ಸುಗಂಧಗಳೇಕೆ
ಸಂದಿಗೊಂದಿಯಲಿರುವ
ಹೊಂಡ ಹೊಲಸುಗಳನ್ನು
ಕಂಡೂ ಕಾಣದ ಹಾಗೆ
ಬಂದು ಹೋಗುತಲಿರುವೆ
ಉಂಡು ಉಬ್ಬಿದ ನಿಮ್ಮ
ದಂಡು ಬೆಳೆಯುತಲಿರಲು
ಎಂದು ಪಡೆಯುವೆ ನಾನು
ಅಂದ ಚಂದದ ಸವಿಯಾ
ನೊಂದು ಬೆಂದಿಹ ಎಲ್ಲ
ಬಂಧು ಭಗಿನಿಯರೆಲ್ಲ
ಒಂದೆ ಮನದಲಿ ಬನ್ನಿ
ಬಂದು ಓರಣ ಮಾಡಿ
ನಾಂದಿ ಹಾಡುವ ನಾವು
ಇಂದ್ರನಗರಿಗೆ....

ವೆಂಕಟರಮಣ ಸಂಕಟಹರಣ

ವೆಂಕಟರಮಣ ಸಂಕಟಹರಣ
ಮೊರಸೆಯ ಜನಮನ ಧಣಿ ಕರುಣ
ಭೂರಮೆರಮಣ ಧನುಶರಧಾರಣ
ಭಕುತಿಗೆ ಒಲಿಯುವ ಗುಣಸದನ.
ವನಸಿರಿ ನಡುವೆ ನಿನ್ನಿರುವಿಂದ
ವನದೇವಿಗಾಯಿತು ಆನಂದ
ವನತರುಲತೆಗಳ ಸುಮಫಲಗಂಧ
ನಿನ್ನೆಡೆ ತರುವಳು ಒಲವಿಂದ.
ಭೂದೇವಿ ಸೇವಿತ ನಿನಜೊತೆಯಾಗುತ
ಜಲದೇವಿ ಹರಿದಳು ಅನವರತ
ವನಖನಿಜಗಳಾ ಒಡಲಲಿ ತರುತಾ
ಬೆಳೆಗಳಿಗಮೃತ ಒದಗಿಸುತಾ.
ಧನುಶರ ಹಿಡಿದಾ ಶುಭಕರದಿಂದ
ಮೃಗಭಯ ಕಳೆಯುವೆ ಗೋವಿಂದ
ಧನಧಾನ್ಯಗಳಾ ವೃಧ್ಧಿ ನಿನ್ನಿಂದ
ಸುಖಶಾಂತಿ ನೀಡುವೆ ಕರುಣದಿಂದ.

ಜಿಗಿಜಿಗಿಯುತ ನಲಿವಾಸೆ

ಜಿಗಿಜಿಗಿಯುತ ನಲಿವಾಸೆ
ಗಗನದ ಬಯಲಲಿ ಕುಣಿವಾಸೆ
ಜಗದಲಿ ತುಂಬಿದ ರಾಗದ್ವೇಷದ
ಮೇಘದ ಪದರವ(ನ್ನು)ಲಂಘಿಸುವಾಸೆ.
ಹರಕೆಯ ಹುರಿಯನು ಹರಿವಾಸೆ
ಕರುಣೆಯ ತುತ್ತನು ತೊರೆವಾಸೆ
ಕರಗಳ ಮುಗಿಯುತ ವರವನು ಬೇಡುವ
ದಾರುಣ ದೈನ್ಯವ ಮರೆವಾಸೆ
ಸಂಸ್ಕೃತಿ ದುಷ್ಕೃತಿ ವಾದವಿವಾದ
ಪ್ರಕೃತಿ ವಿಕೃತಿ ಮಾಡದೆ ಹೋದ
ಆಕೃತಿಗಳ ಜೊತೆ ಲೀಲಾವಿನೋದ
ಸುಕೃತ ಫಲಗಳ ಪಡೆವಾಸೆ.
ಪರಿಸರದಲ್ಲಿ ಸಮತೋಲ
ಹರಿಹರಬ್ರಹ್ಮರದೇ ಲೀಲ
ಮರೆತು ಮಲೆತಿಹ ಮನುಜಕುಲ
ನೆರಳಿನ ಬಂಧಗಳ ಮರೆವಾಸೆ.

ನಮ್ಮೂರು ಮೊರಸೆ

ನಮ್ಮೂರು ಮೊರಸೆ ಅಭಿವೃದ್ಧಿ ಕೂಸೆ
ನಿನ್ನಲ್ಲಿ ರಮಿಸೆ ಇಲ್ಲುಳಿಯುವಾಸೆ
ಮಲೆನಾಡು ಬನಗಳ ಸಾಲಿನಲ್ಲಿ
ಹರಿಯುವ ತೊರೆಗಳ ಸ್ವರಗಳಲ್ಲಿ
ಮುಕುಟಪ್ರಾಯದ ರೇತಿ ಕಂಗೊಳಿಸುವಾ ಛಾತಿ
ಇಹುದಂತು ಸತ್ಯ ಈ ಊರಿಗೆ
ಸಮೃದ್ಧಿ ಸಂಪತ್ತು ನೀಡಿ ನಿಸರ್ಗ
ಶೃಮಜೀವಿ ವರ್ಗದ ಸನ್ನಡತೆ ಮಾರ್ಗ
ಪರವೂರ ಜನಕೆ ಈ ಊರು ದುರ್ಗ
ನಮಗೆಲ್ಲ ನಮ್ಮೂರು ಭೂರಮೆಯ ಸ್ವರ್ಗ
ಸಾಕ್ಷರತೆ ಸಾಧನೆಯು ನಮ್ಮೂರ ಹಿರಿಮೆ
ಅವರೆಲ್ಲ ಸೇವೆಗಳು ದೊರೆತದ್ದು ಕಡಿಮೆ
ಓಡಿಹುದು ನಮ್ಮಿಂದ ನಮ್ಮೂರ ಜಾಣ್ಮೆ
ಇದಕೆಲ್ಲ ಕಾರಣವೆ ಸಾಧನೆಯ ಒಲುಮೆ
ಭರವಸೆಯು ಕುಂದಿಲ್ಲ ಬೇಸರವು ಬಂದಿಲ್ಲ
ನಮ್ಮೂರು ಸಿಹಿಬೆಲ್ಲ ನಮಗೆಲ್ಲ
ಧನ್ಯರಾಗಲಿ ಎಲ್ಲ ಮಾನ್ಯರಾಗಲಿ ಎಲ್ಲ
ಬೇಡುವೆನು ದೇವರಲಿ ಈ ಸೊಲ್ಲ

ಕನ್ನಡವೆಂಬ ಕಾರ್ಮೋಡ

ಕನ್ನಡವೆಂಬ ಕಾರ್ಮೋಡ
ಮನದಾಗಸ ತುಂಬಿದೆ ನೋಡ
ಪದಗಳ ಮಿಂಚಿಸೆ ಆ ಮೋಡ
ಗುಡು ಗುಡುಗುತ ಹಾಡುವೆ ನಾ ಹಾಡ
ಭೂಮಿಯ ಉಸಿರಿನ ಹಸಿರಂತೆ
ನನ್ನೆದೆಯುಸಿರೇ ಕನ್ನಡ ಕವಿತೆ
ಮಳೆಯಿಳೆಗಿಳಿಯದೆ ಹಸಿರೆಲ್ಲಿ
ಈ ಕವನಕೆ ಕನ್ನಡ ರಂಗವಲ್ಲಿ
ಬಯಲುಸೀಮೆ ಮಳೆಕಾಡು
ಅಹ!ಸಾಗರದಾಗರ ಈ ನಾಡು
ಭಾಷೆಯ ಭಿನ್ನತೆಯಾ ಸೊಗಡು
ಅದೆ ಕವಿತೆಯ ಭಾವಕೆ ಸಿಹಿ ಲಾಡು.

ನೇಗಿಲ ಯೋಗಿ

ಹೊಲವನು ಉಳುತಿಹ ಚೆಲುವನ ನೋಡಲು
ನಾ ಲಜ್ಜಿಯಲಿ ತಳಕಿಳಿದೆ
ಮಳೆಗಾಳಿಯಲೂ ಛಳಿ ಬಿಸಿಲಿನಲೂ
ಕೆಲಸದೊಳೊಲವು ಛಲವೂ ಇದೆ
ಕೋಮಲ ತೊಗಲನು ಕಮರಿಸೊ ಬೆವರನು
ಗಮನಿಸದೇ ಪರಿಶೃಮಿಸುವನು
ಧರ್ಮವೊ ಕರ್ಮವೊ ಮರ್ಮಗಳರಿಯನು
ನಿರ್ಮಲ ಮನಸಿನ ಕಾರ್ಮಿಕನು
ನಾಡಲಿ ಎನೇ ನಡೆಯುತಲಿರಲಿ
ಗೊಡವೆಗಳಿಲ್ಲದೆ ದುಡಿವನಿವ
ಪೊಡವಿಯ ಹಸಿವಿನ ಒಡಲನು ತುಂಬಿಪ
ಆ ಢಂಬವನೆಂದೂ ಮಾಡನಿವ
ಭೂರಮೆ ಹರಸಲಿ ಸಾರವ ಸ್ಫುರಿಸಲಿ
ವರುಣನ ಧಾರೆಯು ನೆರವಿಡಲಿ
ಪೈರಲಿ ತೆನೆಗಳು ಅರಳಿ ನಗಲಿ
ಸುರಿಸುವ ಬೆವರಿಗೆ ದರ ಸಿಗಲಿ.


ಕೆಸುವಿನೆಲೆಯಂತ ಕಸುವು ತುಂಬಿದ ಮನಕೆ

ಕೆಸುವಿನೆಲೆಯಂತ ಕಸುವು ತುಂಬಿದ ಮನಕೆ
ಮೋಸದಾಸೆಗಳೆಲ್ಲ ಸೋಸಿ ನುಸುಳದೆ ಇರಲಿ
ಬಸಿದು ಹೋಗುತಲಿರಲಿ
ನಾರಿಯರ ಸೆರಗೆಳೆವ ಪರಮ ಸುಖಗಳು ಬೇಡ
ಪರಧನಕೆ ಪರಿತಪಿಸೊ ನರಿಬುಧ್ಧಿಯು ಬೇಡ
ಪರಿಹಾರ ಕರುಣಿಸಲು ಭಾರ ಬರುವುದು ಬೇಡ
ಹೋರಾಟ ಹಾರಾಟದಲಿ ಪರಹಿತದ ಹಿರಿತನ ಬೇಡ
ಪರರಿಗುಪದೇಶಿಸುತ ದಾರಿತೋರ್ವ ಗುರುತನ ಬೇಡ
ಧರೆಯಾಳ್ದು ಪೂರೆವೆನೆಂಬ ಅರಸುತನ ಗೌರವ ಬೇಡ
ಹಿರಿಯರುಪದೇಶಗಳ ಹರಕೆ ಹಾರೈಕೆಗಳ
ಸಿರಿತನ ವರರಸವು ದಾರಿ ತೋರಿದೆ ಸಾಕು
ವರಬಲದ ಸಾರಹೀರಿ ಹರಡುತಿರುವುದೆ ಗುರಿಯು

ಹಸನಾದ ಹಸಿರಿನ ಕುಲದಲಿ ಜನಿಸಿದ

ಹಸನಾದ ಹಸಿರಿನ ಕುಲದಲಿ ಜನಿಸಿದ
ಮೊಗ್ಗಿನ ಮನಸುಗಳು
ಸುತ್ತಲು ಮುತ್ತಿದ ಕತ್ತಲೆಗಂಜಿ
ಮುದುಡಿ ಹುದುಗಿದ್ದವು
ಗುಡ್ಡದ ಆಚೆಯ ಬೆಳಕಿನ ಊರಿಂದ
ದಿನಕರ ತಾ ಬಂದ
ದುಂಬಿಗಳೊಸಗೆಯ ಜೊತೆಯಲಿ ತಂದೆ
ಅರಳಿರಿ ನೀವಂದ
ಸೂರ್ಯನು ತಂದ ಬೆಳಕನು ಕಂಡ
ಮೊಗ್ಗುಗಳರಳಿದವು
ಧನ್ಯತೆ ಭಾವದಿ ಸೂರ್ಯನ ಕಡೆಗೆ
ತಲೆಯೆತ್ತಿ ನೋಡಿದವು
ಅಧರದ ನಗುವಲಿ ಮಧುಸುಧೆ ತುಂಬಿ
ಮಾದಕವೆನಿಸಿದವು
ಆಸೆಯ ಕೇಸರ ಶಲಾಕೆಯಾಗ್ರದ
ಶಿಖರಕೆ ಎರಿಹವು
ಬೆಸುಗೆಗೆ ಬಂದ ದುಂಬಿಯ ಹಿಂಡು
ಹೂಗಳ ಮುತ್ತಿದವು
ಅವಳಿಂದಿವಳಿಗೆ ಇವಳಿಂದವಳಿಗೆ
ಹಾರುತ ಸುಖಿಸಿದವು
ಮಧುಸುಖವುಂಡ ದುಂಬಿಯ ಹಿಂಡು
ಖುಷಿಯಲಿ ಹಾರಿದವು
ಸೋತು ಸೊರಗಿದ ಸುಂದರ ಸುಮಗಳ
ಮುಖಗಳು ಬಾಡಿದವು
ಕಷ್ಟವ ಸೂರ್ಯಗೆ ಅರುಹುವುದೆಂತು
ಎತ್ತರಕೇರಿಹನು
ಉನ್ನತಿಗೇರಿದ ಅವನೆದುರಿಸದೇ
ತಲೆಗಗಳು ಬಾಗಿದವು
ಹಸಿರು ಮಾತ್ರ ಖುಷಿಯಲೆ ಇತ್ತು
ಕುಲಬೆಳೆಯುವದೆಂದು
ಮಕ್ಕಳು ನೀಡಿದ ಬಸಿರಿನ ಪಿಂಡವ
ಹೊರುವೆನು ತಾನೆಂದು
ನಶಿಸಿದ ಮಕ್ಕಳ ವಸುಧೆಗೆ ಎಸೆದು
ಬಂಧವ ಕಳಚಿತ್ತು
ನಾಳೆಗೆ ತರುಣಿಪ ಮುಕ್ಚಳಿಗೊಸಗೆಯ
ತಾರೆಂದು ಬೇಡಿತ್ತು

ನಾಗರ ಪಂಚಮಿ

ಚಿನ್ನ ನಾಗ ಎಂಥ ಚೆನ್ನ ನಾಗ
ಧನ್ಯನಾಗ ಪೂಜೆ ಪುಣ್ಯಯೋಗ
ಬೆಳ್ಳಿನಾಗ ಎಂಥ ಒಳ್ಳೆ ನಾಗ
ಕುಲವ ಬೆಳೆಸಿ ಬಾಳ ಬೆಳಗೊ ನಾಗ
ಮಣ್ಣುನಾಗ ನನ್ನ ಕಣ್ಣು ನಾಗ
ಬಣ್ಣ ಕೊಡುವೆ ನಿಂಗೆ ಬೆಣ್ಣೆ ನಾಗ
ಕಲ್ಲುನಾಗ ಎಲ್ಲೆಲ್ಲು ನಾಗ
ಹಾಲು ನಿನಗೆ ಬಲವ ತುಂಬು ನಾಗ
ಹುಲ್ಲು ನಾಗ ,ಅಲ್ಲಿರುವೆ ನಾಗ
ತೂಲಗು ಬೇಗ ಕಲ್ಲು ಹೊಡೆವರೀಗ
ನಾಡನಾಗ ಹೆಡೆಯನೆತ್ತಿದಾಗ
ನಡುಕವಾಗ ತಡೆಗೆ ಮಂತ್ರ ಬೇಗ
ಹಾಳು ಹಾಲಾಹಲದ ಬಲದ ನಾಗ
ನಿನ್ನ ಬಲವೇ ನಿನ್ನ ಶತ್ರುವೀಗ
ಬುದ್ಧಿಬಲದಿ ನಿನ್ನ ಗೆದ್ದ ಮನುಜ
ಅದೃಶ್ಯವಾದುದೇ ದೇವರು ನಿಜ.


ಕಾಡ ಬೆಡಗಿ.................

ಮೋಡವು ಕರಗುತ ಜಡಿಮಳೆ ಹಿಡಿಯಲು
ಕಾಡಿನ ಬಡತೊರೆ ಬೆಡಗಿಯಾಯಿತು
ನಡಿಗೆಯ ಬಳುಕಲಿ ಸಡಗರದಿಂದಲಿ
ನಾಡಿನ ಕಡೆಗೆ ಜಾಡು ಹಿಡಿಯಿತು
ಹರೆಯದ ಭರದಲಿ ಮೆರೆಯುತ ಮರೆಯುತ
ಧರಿಸಿದ ಧರಣಿಯ ಕೊರೆಯತೊಡಗಿತು
ಹರಿವಿಗೆ ವೇಗವು ಸರಿಯಲ್ಲವೆಂದ
ಕರಿಬಂಡೆಯ ಝಾಡಿಸಿ ಸರಿದು ಹೋಯಿತು
ಹಿಡಿಯುವರಾರು ತನ್ನನು ಎಂಬ
ಬಡಿವಾರದ ನಡೆ ನಡೆಯತೊಡಗಿತು
ಹಾದಿಯ ಬದಿಯಲಿ ಕಾದಿಹ ಪೂದೆಗಳ
ಮುದ್ದಿಸಿ ಮುಂದಡಿ ಇಡತೊಡಗಿತು
ಮದದಲಿ ನಡೆದಿರೆ ಹಾದಿಯ ನಡುವೆ
ಸುಂದರ ನದಿಯು ಎದುರಾಯಿತು
ಎದೆಯೊಳಗುದಿಸಿತು ಮಿದುಭಾವಗಳು
ನದಿಯೊಡನಾಡುತ ಬದುಕು ಕಂಡಿತು
ಮಳೆಹನಿ ಕಳೆಯಿತು ಜಲತೊರೆ ಬತ್ತಿತು
ಅವಳಿದ್ದಳೆಂಬ ಕುರುಹುಳಿಯೆತು.
ಹೊಳೆಯನು ಸೇರಿದ ಎಳೆಜೀವಕ್ಕೆ
ತಾನಾರೆಂಬುದೆ ಮರೆತುಹೋಯಿತು.

ತಾಯಿ ಭಾರತಿಗೆ ನಮನ

ನನ್ನೆದೆಗೆ ನೀನೊಡತಿ ಓ ತಾಯಿ ಭಾರತಿ
ಸರ್ವರಿಗೂ ಸಮಪಾಲು ಸಮಬಾಳು ನೀತಿ
ನೀ ಭುವನ ಸುಂದರಿಯೆ ಹಸಿರುಡುಗೆ ಧರಿಸಿ
ಶರಧಿಯಲೆ ವೇದಿಕೆಗೆ ನಿನ್ನನ್ನು ಕರೆಸಿ
ಸನ್ಮಾನ ಮಾಡಿದರು ಹಿಮಮಕುಟ ತೊಡಿಸಿ
ಮುಕ್ಕೋಟಿ ದೇವಗಣ ನಿನ್ನನ್ನು ಹರಸಿ
ಶ್ರೀ ಶರಣ ದಾಸ ಸಂತ ಗಾನ ಸಂಗೀತ
ಘಟ ತಾಳ ಮೃದಂಗದ ತಕಧಿಮಿ ಧಿಮಿತ
ವೀಣೆದನಿ ವೇಣುಖನಿ ನಾದಗಳ ಸಹಿತ
ಭಾರತಿಯ ನಾಟ್ಯಕಲೆ ನವರಸ ಭರಿತ
ಸನ್ಮಾರ್ಗ ಸದ್ವಿದ್ಯೆ ಸಂಸ್ಕಾರ ಭರಿತ
ಶ್ರುತಿ ಶಾಸ್ತ್ರ ಗ್ರಂಥಗಳು ನಿನ್ನಯ ಲಿಖಿತ
ನನ್ನೊಡನೆ ಇರುವಾಗ ನಾನು ಧೀಮಂತ
ಕುಂದೆಣಿಸದಭಿಮಾನ ನಿನಗೇ ಶಾಶ್ವತ
ಈ ಭುವಿಯ ಬೆಳ್ಳಿಯ ಪರದೆಯ ಮೇಲೆ
ಸೌಂದರ್ಯದಾ ಖಣಿಯೆ ನೀ ಮಿನುಗುತಾರೆ
ನೆತ್ತರಲೆ ನೀ ಬಯನೆ ಅಭಿಮಾನದೋಲೆ
ಸಲಿಸಿರುವ ಸೈನ್ಯಕ್ಕೆ ಸರಿಸಾಟಿ ಯಾರೆ 

ಜ್ಞಾನದ ಸ್ನಾನದಿ ಮನಶುಚಿಗೂಳಿಸು ಗುಣಬಣ್ಣ ಹೂಳೆವವು ಅನುಗಾಲ.

ಕೊಳೆಗಳ ಕಳೆಯದೆ ಬಳಿದಿಹ ಬಣ್ಣವು
ಮಳೆದಾಳಿಯಲಿ ನಲುಗುತಿದೆ.
ದಿನಗಳೆದಂತೆ ಹಳೆದಾದಂತೆ
ಒಳಗಿನ ಹುಳುಕುಗಳೇಳುತಿದೆ
ಬಲ್ಲವನೆಂದು ಸುಳ್ಳುಗಳಲ್ಲೆ
ಎಲ್ಲರ ಮನದಲಿ ಸಲ್ಲುವನು
ಬಲ್ಲವನೂಬ್ಬನು ಅಲ್ಲಿಗೆ ಬಂದು
ಎಲ್ಲವನಳಿಸಿ ಗೆಲ್ಲುವನು.
ಬಲಹೀನನಿಗೆ ಬಲ ತಾನೆಂದು
ಬೆಲ್ಲದ ಮಾತಲಿ ಓಲೈಸೆ
ಕೆಲ ಕಾಲದಲೆ ಎಲ್ಲವೂ ಬಯಲು
ಕಲ್ಲಲಿ ಹೊಡೆದು ತಳ್ಳುವರು
ಮಾನದ ಆಸೆಗೆ ಏನೇನೇನೋ
ಜಾಣತನಗಳ ತೋರದಿರು
ಜ್ಞಾನದ ಸ್ನಾನದಿ ಮನಶುಚಿಗೂಳಿಸು
ಗುಣಬಣ್ಣ ಹೂಳೆವವು ಅನುಗಾಲ.

ಮೋಡಸಾಗರದಲ್ಲಿ ಈಜಲು ಅಡಿಯನಿಟ್ಟನು ನೇಸರ

ಮೋಡಸಾಗರದಲ್ಲಿ ಈಜಲು ಅಡಿಯನಿಟ್ಟನು ನೇಸರ
ಮೊದಲ ಹೆಜ್ಜೆಯ ಮುದಕೊ ಭಯಕೂ ತನುವು ಕಂಪನೆ ನೆತ್ತರ
ಸ್ಫರ್ಧೆಗಿಳಿಯಲು ಹೆದರಿ ಬೆದರಿ ಚಂದ್ರ ಸರಿದನೆ ಮರೆಯಲಿ
ಬಾನಕಡಲಿನ ಮಿನುಗುಚುಕ್ಕಿ ಮೀನಂಬುಳವಿಳಿದವೆ ತಳದಲಿ
ಈಜುತೀಜುತ ಸೂರ್ಯ ಸಾಗಲು ಮೈಬಿಸಿಯೇರಿತೆ ಶ್ರಮದಲಿ
ಅವನ ಶಾಖವು ಸೂಸಿ ಹರಡಿ ಬಿಸಿಲ ತಂದಿತೆ ಭುವಿಯಲಿ
ಕಸುವು ಇಳಿಯಿತೊ ಉಸಿರುಗಟ್ಟಿತೊ ಮತ್ತೆ ಕೆಂಪದು ಮುತ್ತಿದೆ
ದಣಿದು ವಿರಮಿಸೆ ಸೂರ್ಯ ಸರಿದನೆ ಗುಡ್ಡದಾಚೆಯ ಕೋಣೆಗೆ
ಸೂರ್ಯಸರ್ವಾಧಿಕಾರ ಕಳೆಯಲು ಚುಕ್ಕಿಚಂದ್ರಮ ನಲಿವರೇ
ಒಟ್ಟುಗೂಡುತ ಮತ್ತೆ ಹೂಳೆಯುತ ಶಾಂತಸಾಗರ ಆಳ್ವರೇ.
ಎಷ್ಟೆ ಬೆಳಗುವ ಪ್ರತಿಭೆಯಿದ್ದರೂ ಹಮ್ಮಿಗೇಕಾಂತವೇ
ಶಾಂತ ಮನಗಳ ಸ್ನೇಹ ತಂಪು ಮನಕೆ ನೆಮ್ಮದಿ ತರುವುದು.

ನೇರನೋಟದಿಂದ ನಿನ್ನ ನೋಡಲಾಗದು

ನೇರನೋಟದಿಂದ ನಿನ್ನ ನೋಡಲಾಗದು
ಕರಿಯ ಗುಡ್ಡೆಯಲ್ಲಿ ನಿನ್ನ ಬಿಂಬವಿರುವುದು
ಓರೆನೋಟ ಬಿಟ್ಟು ಬೇರೆ ದಾರಿ ಯಾವುದು
ನೀರೆ ನಿನ್ನ ಬಿಂಬವಾಗ ಅಡ್ಡವಾಗದು
ಮಧುರವಾದ ಪ್ರೇಮಕಾವ್ಯ ಹೆಣೆಯಲಾಗದು
ಮಿದುಳಿನೊಳಗೆ ಬರಿಯ ನಿನ್ನ ರೂಪವಿರುವುದು
ಪದಗಳೆಲ್ಲ ಮರೆಸಿ ನಿನ್ನ ರೂಪ ಮೆರೆವುದು
ಅಧರ ನಡುಕ ನಿನ್ನ ಹೆಸರ ಜಪಿಸುತಿರುವುದು
ಹೃದಯ ಮಿಡಿತ ಹಿಡಿತ ಮೀರಿ ಬಡಿಯುತಿರುವುದು
ಕುದಿದು ರಕ್ತ ಶಕ್ತಿಯಾವಿ ಹಾರುತಿರುವುದು
ಎದುರು ನಿಂತು ಮಧುರ ನುಡಿಗಳಾಡಲಾಗದು
ತೊದಲು ನುಡಿಗಳಿಂದಲೇನೂ ಕುದುರಲಾರದು
ತಿರುಗಿ ಒಮ್ಮೆ ನನ್ನ ಕಡೆಗೆ ನೋಡಬಾರದೆ
ಕರೆಯುತಿರುವ ಕಣ್ಣನೋಟ ಅರಿಯಬಾರದೆ
ಬೀರಿ ನಗುವ ಉರಿಗೆ ನೀರ ಸುರಿಯಬಾರದೆ
ಕೋರಿಕೊಳಲು ಧೈರ್ಯವನ್ನು ತುಂಬಬಾರದೆ.

ಹರಿವು-ಅರಿವು

ನಾನು ಅವನು ಜೊತೆಯಲ್ಲಿ
ಸೊಪ್ಪಿಗೆ ಹೋದೆವು ಅಡವಿಯಲಿ
ಜಲಲ ಜಲಲ ಜಲತೊರೆಯ ಬಳಿ
ಅಯ್ಯೋ,ಉಂಬಳಗಳ ದಾಳಿ
ಬಾಗಿಸಿ ಬಳುಕಿಸಿ ಸರಿವ ಹುಳ
ತವಕಿಸಿ ನೆತ್ತರ ರಸಗವಳ
ಮುತ್ತಿತು ನಮ್ಮಯ ಪಾದಗಳ
ಪಾದದೊಳೇನೋ ಮುಲಮುಲ ಬಹಳ
ನಾನೊಡೆಯ,ಅವನನ್ನಾಳು
ಎನ್ನುವದೆಣಿಸದೆ ಜಿಗಣೆಯ ಕರುಳು
ಬೇಧಗಳೆಣಿಸದೆ ಕಡಿಯುತಲಿರಲು
ಕಿತ್ತರು ಹರಿವುದು ನೆತ್ತರು ಬುಳುಬುಳು
ಹರಿಯುವ ನೆತ್ತರ ಬಣ್ಣವು ಒಂದೆ
ಉಂಬಳಗಳಿಗೆ ರುಚಿಯೂ ಒಂದೆ
ಉಂಬಳದುದರಕೆ ಔತಣವಾಯ್ತು
ಅವನಮ್ಮವನೆಂದು ನನಗರಿವಾಯ್ತು
ಇಂದು ನಮ್ಮಂತರ ಗತ್ತು ಸಂಪತ್ತು
ನಾಳೆ ಯಾರೆಂತೊ ವಿಧಿಗೇ ಗೊತ್ತು
ಬೇಧಗಳೆಣಿಸದ ಸ್ನೇಹ ಸಂಪತ್ತು
ಅನರ್ಘ್ಯ ಮುತ್ತು, ಶಾಶ್ವತ ಸ್ವತ್ತು.

ಸ್ವಂತ ಕಾಲಲಿ ನಿಂತ ಶಾಂತ ಬದುಕು

ಮಲೆಗಳಲಿ ತಿರು ತಿರುಗಿ ಮೆದ್ದಿರುವ ಮೇವನ್ನು
ಮೆಲುಕುತಿವೆ ಹಸುಗಳಿವು ಸುಖದಿ ಮಲಗಿ
ಮಲಗಿರುವ ಸುಖಕಿಂತ ಮೆಲುಕುವಾ ರುಚಿಯೇ
ಮಿಗಿಲೆಂದು ಮೆಲುಕುತಿವೆ ಅರೆಗಣ್ಣ ತೆರೆದು
ಹುಲ್ಲು ಹಸಿರನು ಹುಡುಕಿ ಸವೆಸಿದಾ ದಾರಿ
ಕಲ್ಲು ಮುಳ್ಳಲಿ ಪಟ್ಟ ನೋವೆಲ್ಲ ಹಾರಿ
ಫಲಿತ ಸವಿಯೂಟವನು ಸವಿಯುತಿದೆ ಹೋರಿ
ಎಲ್ಲ ಭೂನಿಯಮವೆಂದು ಗೌರವವ ತೋರಿ
ತುರುಜನ್ಮ ನಿರುಕಿಸಲು ಅರಿವಾಗುತಿಹುದು
ಮರೆತಿರುವ ನೆನಪುಗಳು ಮರುಕಳಿಸುತಿಹುದು
ದುರಿತಗಳ ದಾರಿಯಲಿ ಅರಿವನ್ನು ಪಡೆದು
ಮೆರೆಯುತಿರೆ ಆ ದುರಿತ ಖುಷಿ ತರಿಸುತಿಹುದು
ಹರಿದ ಬಟ್ಟೆಯ ಮತ್ತೆ ದಾರದಿಂದಲಿ ಹೊಲಿದು
ಸರಿಪಡಿಸಿ ಕೊಟ್ಟಮ್ಮ ಭೂಮಿಗಾತ್ರ
ಹಸಿವು ಎನ್ನುತ ಅಳಲು ಹಸಿಗೆಣಸ ಕಿತ್ತು
ಬೇಯ್ಸಿ ಕೊಟ್ಟಪ್ಪ ಮುಗಿಲಿನೆತ್ರ
ಜೇನುಹುಟ್ಟನು ಕಿತ್ತು ಮಾಣಿ ನಿನಗೆ ಎಂದ
ನಾಣಿ ತಿಮ್ಮರ ಪ್ರೀತಿ ಹನಿತರಿಸುತಿಹುದು
ತನ್ನ ಹೆಗಲಲಿ ಕುಳಿಸಿ ಕಾನನೆಲ್ಲವ ಸುತ್ತಿ
ಮೀನ ತೋರಿದ ನೆನಪು ಕಣ್ಣೊರೆಸುತಿಹುದು
ಬೇಲಿನಾಲಲಿ ಸುತ್ತಿ ಮುಳ್ಳ ಹಣ್ಣನು ಕಿತ್ತು
ಮೆಲುತಿರುವ ಆ ಕಾಲ ಬೇಕೆನಿಸುತಿಹುದು
ಬುಡ್ಡಿದೀಪದ ಪ್ರಭೆಗೆ ಕಡ್ಡಿಯಾಡಿಸ ಹೋಗಿ
ಮಂಡೆ ಸುಟ್ಟೋಗಿದ್ದು ಮಜ ತರಿಸುತಿಹುದು
ಹಸಿರ ನಡುವಿನ ಮನೆಯ ಕೆಸರಿನಂಗಳದಲ್ಲಿ
ಕೆಸರಾಟವಾಡಿದ್ದು ಖುಷಿಯ ನೆನಪು
ಭತ್ತ ಬಣವೆಯ ಮೇಲೆ ಹತ್ತಿ ಜಾರುವ ಆಟ
ಪಟ್ಟೆಂದು ಹೊಡೆಸಿದ್ದು ಕೆಟ್ಟ ನೆನಪು
ಸ್ವಂತ ಮನೆಯನು ಅಗಲಿ ನೆಂಟರಾ ಮನೆಗಳಲಿ
ನಿಂತು ಶಾಲೆಯ ಕಲಿತೆ ಎಂಥ ಮೆಲುಕು
ಅಂತೂ ಇಂತೂ ಕಲಿತು ಪಂಥ ಗೆದ್ದವನಂತೆ
ಸ್ವಂತ ಕಾಲಲಿ ನಿಂತ ಶಾಂತ ಬದುಕು

ಭಾವ ಬಿರಿಯಿತು ಜೀವ ಕುಣಿಯಿತು

ಭಾವ ಬಿರಿಯಿತು ಜೀವ ಕುಣಿಯಿತು
ಕವಿತೆ ಮೂಡಿತು ಎದೆಯಲಿ
ಭವ್ಯ ಕನ್ನಡದಾಳ ಅರಿಯೆನು
ಕಾವ್ಯವಾಗಿಸಲಾರೆನು
ಸುತ್ತ ಸುಂದರ ರಮ್ಯ ಪರಿಸರ
ಮತ್ತು ಏರಿದೆ ಮನದಲಿ
ಎತ್ತಿ ಹೇಳಲು ಬಿತ್ತರಿಸಲು
ಎತ್ತ ಹೋದವೊ ಪದಗಳು
ಕವಿತೆಯಾಗಲು ಸ್ಫೂರ್ತಿ,ನೀತಿ,
ತೃಷೆಗಳಿದ್ದರೆ ಸಾಲದು
ಸವಿವ ಮನಸ್ಥಿತಿ ಅವಿರತ ಶ್ರಮ
ಕೃಷಿಗಳಿಲ್ಲದೆ ಆಗದು
ಸುರಿವ ಭಾವವ ಮರೆಸಲೇತಕೆ
ಬರುವ ಪದದಲೆ ಬರೆದಿಡು
ಸರಿಯೊ ತಪ್ಪೋ ಕೊರಗು ಏತಕೆ
ಅರಿವ ಮನಗಳ ಎದುರಿಡು

(ಆ)ಬುದ್ಧಿಜೀವಿಗಳ ಸದ್ದು

ಬುದ್ಧಿಜೀವಿಗಳ ಸದ್ದು ಕೇಳುತಿಹುದು
ಗೆದ್ದೇ ಬಿಡುವ ಬುದ್ಧಿ ತೋರುತಿಹುದು
ಮುದ್ದು ಮಾತುಗಳು ನಿದ್ದೆಗಿಳಿದು
ಗದ್ದಲವನೆಬ್ಬಿಸಿಹುದು.
ನವ್ಯತೆಯ ಜಾಡು ಹಿಡಿದು
ಭವ್ಯ ಸಂಸ್ಕೃತಿಯ ಜರಿದು ತುಳಿದು
ಥರ್ಮಗಳು ಮೌಢ್ಯವೆಂದು
ಚಾರ್ವಾಕರಾದರಿವರು
ಶುಧ್ಧ ಭಾರತಿಯ ಒಡಲಿನಲ್ಲಿ
ವೇದಗಳ ಕಲಿತು ಅರಿತು
ಬುಧ್ಧ ಜಿನ ಬಸವರೆಲ್ಲಾ
ಶುಧ್ಧತೆಗೆ ನಿಂತರಲ್ಲಾ
ಶೋಧಿಸಿದ ಮೌಲ್ಯಗಳನು
ಬೊಧಿಸಿದ ಯತಿಗಳಿದ್ದ್ರು
ಆ ದಯಾನಂದರಂತ
ಸುಧಾರಕರಾಗಿಹೋದ್ರು
ಅಹಿಂಸೆ ಎತ್ತಿ ಹಿಡಿದೇ
ಸಹಿಷ್ಣುವೆಸಿಕೊಂಡ್ರು
ಈ ಬುದ್ಧಿಜೀವಿಗಳಿಗೆ
ಆ ಬುದ್ಧಿ ಏಕೆ ಇಲ್ವ
ಹಕ್ಕುಗಳು ತಮ್ಮದೆಂದು
ಮೂಕಿಗಳ ಕಡಿದು ತಿಂದ್ರು
ಅ ಕಾಲ ತಮಗೆ ಬರಲು
ಲೋಕ ಕಂಟಕವೆಂದ್ರು
ಕಡಿಯುವುದು ಧರ್ಮವಾದ್ರೆ
ಮಿಡಿವುದೇತಕೆ ಸಾವಿಗೆ
ಪಾಶ್ಚಾತ್ಯರಾದರವರು
ಪಶ್ಚಾತ್ತಾಪವೇಕೆ ನಮಗೆ.
ಭಾರತದ ನೆಲದಲ್ಲಿ
ವಿರೋಧವೇನೆ ಇದ್ರು
ಪರಿವರ್ತಕರ ಕೊಂದ
ಗುರುತಗಳೇನೂ ಇಲ್ಲ
ನೆಲದಿಂದೋಡಿಸಲಿಲ್ಲ
ಶಿಲುಬೆಗೇರಿಸಲಿಲ್ಲ
ರಾಜಾಶ್ರಯವನಿತ್ತು
ವಿಜಯವಾಗಿಸಿಹರು
ಅಂತ ಸಂಸ್ಕೃತಿಯ ಒಡನಾಟ
ತಂತೇ ಇಂತಾ ಬುದ್ಧಿ.????
ಸ್ವಂತ ವಿಷಯಗಳಲ್ಲಿ
ಕ್ರಾಂತಿ ಯಾತಕೆ ಬೇಕು
ಶಾಂತಿಯಿಂದರುಹಿ
ಭ್ರಾಂತಿ ಕಳೆದರಾಗದೇ.

ನಮ್ಮಯ ಮಾತೆ ಗೋಮಾತೆ

ನಮ್ಮಯ ಮಾತೆ ಗೋಮಾತೆ
ಸಮನ್ಯಾರು ಇವುಗಳ ತ್ಯಾಗಕೆ
ಅಮ್ಮನ ಸಮ ಶ್ರಮ ಪ್ರೇಮವನೀಯುತ
ನೆಮ್ಮದಿ ನೀಡುವಳು
ತಮ್ಮಯ ಕೆಚ್ಚಲ ಅಮೃತ ಕುಡಿಸುತ
ನಮ್ಮನು ಪೂರೆಯುವಳು
ಹುಲುಮಾನವನಲಿ ನಾಗರಿಕತೆಯು
ಬಲಿಯಲು ಸೆಲೆ ಇವಳು
ಹೊಲವನು ಉಳುತಲಿ ಬೆಳೆಗಳ ಬೆಳೆಯಲು
ಬಲವನು ತಂದವಳು
ಚಲನೆಗೆ ಸುಖವನು ತಂದವಳು
ನಲುಗದೆ ಭಾರವ ಎಳೆದವಳು
ಮಲದಲು ಹುಲುಸಾದ ಸಾರವನಿತ್ತು
ಇಳೆಯನು ಬೆಳಗುವಳು
ತನ್ನಯ ಕರುಗಳ ತೆರದಲಿ ಸಸಗೂ
ನನ್ನೆಯ ಹರಿಸಿಹಳು
ಕನ್ನಡಿಯೊಳಗಿನ ಬಿಂಬದ ತೆರದಿ
ನನ್ನೊಳಗಿಳಿದಿಹಳು
ಪುಣ್ಯದ ಅರ್ಥವ ಕಲಿಸಿಹಳು
ಪುಣ್ಯಕೋಟಿಯೆ ನನಗವಳು
ಇನ್ನೇನಿದ್ದರೂ ಅವಳನು ಉಳಿಸಲು
ಪಣವನು ನಾ ತೊಡುವೆ
ತೃಣವನೂ ನೀಡದೆ ಮನುಜನು ಅವಳನು
ದಣಿಸಿದರೂ ಅವಳು
ಅನುಮಾನಿಸದೆ ಮನುಜರ ಸೇವೆಗೆ
ತನುವನು ಎರೆದವಳು
ಹಣದಾಹಕೆ ಮಣಿಯೆನು ನಾನು
ಹನನವ ಒಪ್ಪೆನು ಇನ್ನು
ಜನಮಾನಸದಲು ಈ ಅರಿವನ್ನು
ಪಸರಿಸಲಣಿ ನಾನು.

ಮಳೆ ಸುಳಿಯ ಬಾಳು


ಇಳೆ ಬಿರಿವಂತೆ ಝಳವೇರುವುದು
ಕಳೆಗಳೂ ಸತ್ತು ತಳಹಿಡಿಯುವುದು
ನಾಳಿನ ಬಾಳಿನ ಕಳವಳದಲ್ಲಿ
ಇಳಿದಿದೆ ಕಣ್ಣೀರು.
ಹನಿಸಲು ಮಳೆಯು ಮನ ಅರಳುವುದು
ಧಾನ್ಯವ ಬಿತ್ತಲು ತನು ಶ್ರಮಿಸುವುದು
ಅನುಪಾಲಿಸುತಲಿ ಕನಸನು ಕಟ್ಟಲು
ಹನಿಸಿದೆ ಪನ್ನೀರು.
ತಟ್ಟನೆ ಮಳೆಯು ಮರೆಯಾಗುವುದು
ನೆಟ್ಟಿಹ ಹಸಿರು ಸುಟ್ಟೊಣಗುವುದು
ಕಟ್ಟೆಯ ಕಟ್ಟಿ ಹರಿಸುವ ತೋಡಲು
ಬತ್ತಿತು ಹಿನ್ನೀರು.
ಬಿಸಿಲಿನ ನಡುವೆ ಸುಳಿ ಮಳೆ ಗಾಳಿ
ಮುಸುಕಿದ ತೆನೆ ಮೇಲೆ ಮಾಡುತ ದಾಳಿ
ಕೃಷಿಕನ ಹಸಿರಿನ ಬಸಿರಿನ ಆಸೆಗೆ
ಬಸಿಯಿತು ತಣ್ಣೀರು.

ನೀನಿರುವಾಗ ನನ ಸನಿಹ ಬದುಕಿನ ಬವಣೆಗಳೇನು ಮಹಾ

ಓಂ ನಮೋ ನರಸಿಂಹ
ನರಸಿಂಹಾಯ ಓಂ ನಮಃ
ನೀನಿರುವಾಗ ನನ ಸನಿಹ
ಬದುಕಿನ ಬವಣೆಗಳೇನು ಮಹಾ
ಮನವೆಂಬೀ ಮನೆಯಲ್ಲಿ
ಪಾಪದ ನೂರು ಕೊಳೆಯಿರಲಿ
ಕರುಣೆಯೆ ನಿನಗೆ ಕಸಬರಿಗೆ
ಹಿಡಿಯುತ ಗುಡಿಸಿದೆ ಅಣುವರೆಗೆ
ನೀನಿರುವಾಗ ನನ ಸನಿಹ
ಮನಶುದ್ಧಿಯಾಗುವುದೇನು ಮಹಾ
ಮನವೆಂಬೀ ಬಯಲನ್ನು
ನೀರಿಳಿಸಿ ಹದಗೊಳಿಸಿ
ಭಕ್ತಿಯ ಬೀಜವ ಬಿತ್ತುತಲಿ
ಸೇವೆಯ ಫಲವಾ ಪಡೆಯುವೆಯೊ
ನೀನಿರುವಾಗ ನನ ಸನಿಹ
ನಿಜಭಕ್ತನಾಗುವುದೇನು ಮಹಾ
ಮನವೆಂಬೀ ಮನವನ್ನು
ಶುಚಿಗೋಳಿಸಿ ಭಕ್ತನಾಗಿಸಿ
ನಾನು ಎನುವುದ ಕಳೆಯುತಲಿ
ನೀನೆ ಎನುವುದ ಬೆಳೆಸುತಲಿ
ನೀನಿರುವಾಗ ನನ ಸನಿಹ
ನಿಜ ಮುಕ್ತಿ ಮಾರ್ಗವದೇನು ಮಹಾ

ವಿರಹ

ಸಂಗಾತಿ ತಂಗಿಯ ಮದುವೆಗೆಂದು
ಸಿಂಗಾರಗೊಂಡು ಹೊರಟಿಹಳು
ಸಂಗಡ ನನ್ನಯ ನಗುವನ್ನೆಲ್ಲ
ಇಂಗಿಸಿ ರೇಗಿಸುತಿರುತಿಹಳು
ರಂಗಿನ ಆಸೆಗೆ ಭಂಗವ ತಂದು
ತಂಗಿಹಳವಳು ತವರಿನಲ್ಲಿ
ಮಾಗಿಯ ತಂಗಾಳಿ ಬೀಸಿದರೂ
ಅಂಗದ ಬೇಗೆಯು ತಣಿಯದಿದೆ
ಅಂಗದನಂಗನ ಜೋಗುಳ ಹಾಡಿ
ಯೋಗದ ನಿದ್ರೆಗೆ ಜಾರಿಸಿದೆ
ಅಂಗಳದಲ್ಲಿಯ ಆ ರಂಗವಲ್ಲಿ
ನಗುತಲಿ ಮತ್ತೆಚ್ಚರಾಗಿಸಿದೆ಼.
ಹೂಗಳ ತೊಗಲಲಿ ಅವಳನು ಕಂಡೆ
ಮಾಗಿದ ಹೂಗಳ ಮುದ್ದಿಸಿದೆ.
ತಾಗಿದ ಕೆನ್ನೆಯ ಬೇಗೆಯು ಧಗೆಗೆ
ಹೂಗಳೂ ದಳಗಳ ಉದುರಿಸಿದೆ.

ಗಾಳಿಯಲ್ಲಿ ತೇಲಿ ತೇಲಿ

ಗಾಳಿಯಲ್ಲಿ ತೇಲಿ ತೇಲಿ
ನಲಿವಲುಲಿವ ಹಕ್ಕಿಗಳುಲಿಯು
ಒಲಿದು ಮೆಲುವ ಮನಗಳಿಗಾಗಿ
ಅಲ್ಲ ಸತ್ಯವು
ಫಲವ ಮೆಲಲು ಬಳಗಕೆ ಓಲೆ
ಕಳಿಸೆ ಉಲಿವ ಉಲಿಗಳ ಕೇಳೆ
ಬಳಗ ಬಂಧು ಗೆಳೆತನದರ್ಥ
ತಿಳಿಯುತಿರುವುದು
ಒಲವ ಕರೆಯ ಗೆಳೆಯಗೆ ತಿಳಿಸೆ
ನುಲಿದು ಕಾಮಕೇಳಿಗಿಳಿಸೆ
ಉಲಿದು ಗೆಲಿದು ಒಲವಿನ ಭಾಷೆ
ಕಲಿಸುತಿರುವುದು
ಕಾಳ ಕಸಿಯೆ ಖೂಳರ ದಾಳಿ
ವೇಳೆ ಕಲಹದುಲಿಯನು ಕೇಳಿ
ನೆಲೆಯನುಳಿಸೆ ಸೆಲೆ ಹೋರಾಟ
ತಿಳಿಯುತಿರುವುದು
ಬೆಲೆ ಬಯಸದೆ ನಲಿವ ನೀಡಿ
ಹೊಲದಿ ಕಾಳ ಮೆಲುತಿರೆ ನೋಡಿ
ಬಲೆಯ ಕಟ್ಟಿ ಕಲ್ಲು ತೂರಿ
ತೊಲಗಿಸೊ ಮನುಜನು
ಕಲೆಗಳಲ್ಲೆ ಎಲ್ಲರನೊಲಿಸಿ
ಬಲ ಬೆಲೆಗಳನೆಲ್ಲ ಗಳಿಸಿ
ಇಲ್ಲಸಲ್ಲದಾಸೆಗಿಳಿಯೆ
ಗಲ್ಲಕ್ಕೆ ಹೊಡೆಯನೆ.

ಸ್ಪಂದನೆ

ಧನುಶರ ಹಿಡಿಯದೆ ನೀ ಕರದಲ್ಲಿ
ಕಣ್ಣಿನ ನೋಟದ ಬಾಣಗಳಲ್ಲೆ
ಮಣಿಸುವೆಯಲ್ಲೇ,ಗೊಣಗುವೆಯಲ್ಲೇ
ತಾಯಿಯ ಮನೆ ಜಪ ಮಾಡುವೆಯಲ್ಲೇ
ಸಾಯುವ ಮಾತುಗಳಾಡುವೆಯಲ್ಲೆ
ಬೇಯುವೆಯಲ್ಲೇ,ಬಯ್ಯುವೆಯಲ್ಲೆ
ಸುಡುಬಿಸಿಲಿಗೆ ನೀರು ಕಡಲನು ತೊರೆದು
ಮೋಡಗಳಾದರೂ ತಣಿಯುವವಲ್ಲೆ
ಕಡಲನು ಮರಳಿ ಸೇರುವವಲ್ಲೆ
ದುಡುಕಿ ನಾನಾಡಿದ ಒಂದೇ ನುಡಿಗೆ
ಸಿಡುಕುತಲಿದ್ದರೆ ಸಾಗದು ನಡಿಗೆ
ತಡವುವೆ ತಣ್ಣಗೆ ಉದುರಿಸು ಹೂನಗೆ
ಮುಟ್ಟಲು ಮುದುರುವ ನಾಚಿಕೆ ಪೊದೆಯು
ಮತ್ತರಳಿಸಿ ಎಲೆಗಳ ಹರಡುತಲಿಹವು
ನೀತಿಯೆಂದರಿಯೇ ,ಚಿಂತೆಯ ಕಳೆಯೆ
ಇಬ್ಬರೂ ಶಾಂತಿಯ ಬೆಲೆಯರಿತಿದ್ದರೆ
ಒಬ್ಬರನೊಬ್ಬರು ಕ್ಷಮಿಸುತಲಿದ್ದರೆ
ಹಬ್ಬವೇ ಚದುರೆ,. ಕಂಬನಿಯೇಕೆ

ಕಪ್ಪೆಚಿಪ್ಪಿನ ಮುತ್ತು

ಕಪ್ಪು ಮರಳಿನ ಕಣವು
ಆಪ್ಪಳಿಸೊ ತೆರೆಯೊಳಗೆ
ತಪ್ಪಿಸೇರುತ ತಲುಪೆ
ಕಪ್ಪೆಚಿಪ್ಪಿನ ಒಳಗೆ
ಒಪ್ಪದಿಹ ಮೃದ್ವಂಗಿ
ಕೋಪದಲಿ ವಿಷವುಗುಳೆ
ಶಾಪವೇ ವರವಾಗಿ
ಒಪ್ಪಿ ಅಪ್ಪುವ ಮುತ್ತಾಯ್ತು
ಸೊಪ್ಪು ಹಾಕದೆ ವಿಷಕೆ
ಕಪ್ಪೆಚಿಪ್ಪಲೆ ಉಳಿಯೆ
ಸಿಪ್ಪೆ ಸುತ್ತಲು ವಿಷವು
ಅಪ್ಪಳಿಸೆ ಹೊಳಪಾಯ್ತು
ಪಾಪಿಗಳ ಕೋಪಕ್ಕೆ
ತಾಪಗೊಳ್ಳದೆ ಸಾಗು.
ತಪ್ಪಿಲ್ಲದಿರೆ ನಿನ್ನ
ಒಪ್ಪುವರು ಸುಮನರು

ಸೂರ್ಯಾಸ್ತ

ಪೂರ್ವದ ಅರಮನೆ ಅರವಟ್ಟಿಗೆಯನು
ಏರಿದ ಆ ರವಿ ನಸುಕಿನಲಿ
ಭೂರಮೆ ಸೊಬಗಿನ ದರುಶನದಾಶೆಯು
ತೋರಿದೆ ಆತನ ನಿಲುವಿನಲಿ
ಸೂರ್ಯನ ರೂಪಿಗೆ ಮುರುಳಾಗಲು ಇಳೆ
ಅರಳಿತು ಹೃದಯವು.ಹೂಗಳಲಿ
ಮರೆಯುತ ಮೈಮನ ಸರಿಸದೆ ನೋಟವ
ಸೂರ್ಯನ ನೋಡ್ವವು ಒಲವಿನಲಿ
ಹೂಗಳ ನೋಟಕೆ ತೂಗುವ ಭಂಗಿಗೆ
ಆಗಸದೊಡೆಯನು ಬೀಗುತಲಿ
ಮೊಗದಿಂದೆಸೆಯುವ ನಾಚಿಕೆ ರಂಗಲಿ
ಅಂಗವ ಮೆತ್ತಿತು ರಂಗವಲ್ಲಿ.

ರಾಜ್ಯೋತ್ಸವದ ಶುಭಾಷಯಗಳು

ಈ ನಾಡ ಮಾಮರದ ಚಿಗುರಾಗುವೆ
ನಾ ಹಾಡೊ ಕೋಗಿಲೆಗೆ ನೆರಳಾಗುವೆ
ಈ ನಾಡ ಹೂವುಗಳ ತೋರಣದಲಿ
ನಾ ಸೇರೋ ಸೌಭಾಗ್ಯ ನನದಾಗಲಿ
ಆ ತಾಯಿ ಬೇರಿಂದ ಹೀರಿರುವೆನು
ಈ ಮಣ್ಣ.ಕಣಕಣದ ರುಚಿ ಬಲ್ಲೆನು
ಸಾಗರದ ತಂಗಾಳಿ ತನ್ನ ಜೊತೆಯಲಿ
ಶ್ರೀಗಂಧ ಪೂಸಿಹುದು ನನ ಮೈಯ್ಯಲಿ
ಹಸಿರಾದ ಹಿರಿತಲೆಯು ನನ್ನ ಹರಸಿದೆ
ಹಿಂದೆ ಸರಿದು ತೋರಣಕೆ ನನ್ನ ತೋರಿದೆ
ಆಸೆಗಳು ತೀರದೆಯೆ ಹಣ್ಣಾದರೂ
ಈ ನೆಲದ ಮಣ್ಣನ್ನೆ ನಾ ಸೇರುವೆ

ವಸುಧೆಯ ಸೊಬಗು

ವಾಂಛೆಗಳಿಲ್ಲದ ನಿಶ್ಚಲ ಬಂಡೆಯ
ಮೆಚ್ಚಿಸುವಾ ಬಯಕೆ.
ಕೊಚ್ಚೆಗೆ ಕಲ್ಲನು ಎಸೆದಂತೆನಿಸದೆ
ಪಿಚ್ಚೆನಿಸದೆ ಮನಕೆ
ಪಾಚಿಗಟ್ಟಿಹುದು ಆ ಚೂಪುಗಲ್ಲಿನಲಿ
ನೀ ಚೆಲ್ಲಿದ ಒಲವಸುಧೆ
ನಾಚುತ ಬಳುಕಿದೆ ನೀನೇ ಅಲ್ಲಿ
ಅಚಲವು ಆ ಬಂಡೆ
ಹಚ್ಚ ಹಸಿರಿನಾ ಬಿಚ್ಚು ಮನಗಳಲಿ
ಬಿಚ್ಚಿಟ್ಟಿಹ ಪ್ರೀತಿ
ನೆಚ್ಚಿಕೊಂಡಿದ್ದರೆ ಹುಚ್ಚೆನಿಸುವುದು
ಬಚ್ಚಿಡುವೆಯಾ ಗರತಿ
ಮೆಚ್ಚಲಿ ಬಿಡಲಿ ಹಚ್ಚಿಕೊಂಡಿರುವೆ
ಮುಚ್ಚಿಹೆ ತನುವಲ್ಲಿ
ಬಾಚುವ ನಿನ್ನಯ ಬಿಗುದೋಳುಗಳಾ
ಹಚ್ಚೆಯು ಮೂಡಿತಲ್ಲಿ
ಕೆಚ್ಚಿದೆ ನಿನ್ನಲಿ ಮೆಚ್ಚಿದೆ ಜಗವು
ಅಚ್ಚಳಿಯದ ಚಿತ್ರ
ಸಚ್ಚಿದಾನಂದವ ಹಂಚಿದೆ ನಿನ್ನಯ
ಕುಂಚದ ಆ ಚಿತ್ರ

ಹೆಣ್ಣನ ವರ್ಣನೆ ಬಲು ಕಷ್ಟ!

ನಿನ್ನೆಯವರೆಗೂ ಹೆಣ್ಣನು ವರ್ಣಿಸೆ
ಕನ್ನಡ ಪದಗಳ ಹುಡುಕುತಿಹೆ
ಕಣ್ಣುಗಳೆರಡೂ ಸೋತವೆ ಹೊರತು
ಬಣ್ಣಿಸದಾ ಪದ ಕಾಣದಿಹೆ
ನನ್ನಯ ಬೆಳಕು ಕಂದನೆ ಎನ್ನುತ
ತನ್ನಯ ತನುವನು ಹಿಂಡುತಲಿ
ತನು ಮನದಿಂದಾ ಎಣ್ಣೆಯನಿಳಿಸುತ
ಹಣತೆಗೆ ಸುರಿಸಿ ಬೆಳಗಿಹ,ಬೆಳೆಸಿಹ,
ತನ್ನಯ ಅಮ್ಮನ ತನು ಸೊರಗಿರಲು
ಸಣ್ಣವಳಾದರು ತಾನಿನ್ನೂ
ಮನೆಗೆಲಸವನು ತಾನೂ ಮಾಡುತ
ಸಣ್ಣವ ತಮ್ಮ ಎನ್ನುವ,ಚಿನ್ನವ
ಅನುದಿನ ಹೆಣ್ಣಿನ ಅನುಗ್ರಹದಲ್ಲೇ
ದಿನಗಳೆದಿದ್ದರೂ ಏನೆನಿಸಿಲ್ಲ.
ನನ್ನೊಳಗುದಿಸಿತು ವರ್ಣಿಸುವಾಸೆ
ಮುನ್ನುಡಿಯಾಗಲು ಕಾರಣ,ಯೌವ್ವನ.
ಅನುಪಾಲನೆಯಲಿ ದಿನಗಳ ಕಳೆದು
ಮನದಲಿ ಬಣ್ಣದ ಕನಸುಗಳುದಿಸಲು
ಬಿನ್ನಾಣ ಬೆಡಗಿನ ಕನ್ಯೆಯು ಎದುರಿರೆ
ನನ್ನವಳಾಗಿಸೊ ಆಸೆಗೆ,ಖುಷಿಗೆ,

ಹೊಸವರ್ಷಾಚರಣೆ

ನಶೆಗಳ ಆಸೆಯ ತೃಷೆಗಳ ಖುಷಿಗೆ
ಹೊಸವರ್ಷಾಚರಣೆ ಹಾಸಿತು ಹಾಸಿಗೆ
ವಸುಧೆಯನುಳಿಸುವ ಸಂಸ್ಕೃತಿಯೊಳಗೆ
ಖುಷಿಯಾಚರಣೆಯು ನಶಿಸಿದೆ ಹೀಗೆ
ಸರಿಯುವ ಕಾಲದ ಗುರುತುಗಳನ್ನು
ಅರಿವಿನಲಿಡಲು ದಾರಿಗಳನ್ನು
ಪರಿಪರಿ ವಿಧದಲಿ ಪರಿಕಿಸಿ ಹಿರಿಯನು
ಸೂರ್ಯ ಸಂಬಂಧವೆ ಕಾರಣವೆಂದರಿತನು
ಕತ್ತಲು ಹಗಲು ಋತುಮಾನಗಳ
ಪಥಪರಿಕ್ರಮಣದ ನಿರ್ದಿಷ್ಟತೆಗಳ
ಉತ್ತಮ ಪಡಿಸಲು ಶೃಮಿಸಿಹ ಬಹಳ
ಅಂತಿಮಗೊಳಿಸಿಹ ಈ ಕ್ರಮ ಸರಳ
ಸೂರ್ಯನ ಸ್ಥಾನವು ಸರಿಯಲಿ ಬಿಡಲಿ
ಚಂದ್ರನು ತಾರೆಯರೊಡಗೂಡಲಿ ಬಿಡಲಿ
ಪ್ರಕೃತಿಯೊಳಗೆ ಬದಲಾಗಲಿ ಬಿಡಲಿ
ದುಷ್ಕೃತಿಯಳಿಯಲಿ ವಿಕೃತಿಯಳಿಯಲಿ
ಹಿರಿಯರು ನೀಡಿದ ಕೊಡುಗೆಗಳಿಗೆ
ಗೌರವಿಸುವಂತಿರಲಿ ಆಚರಣೆಯ ಬಗೆ
ಸಾರಗಳರಿಯದೆ ಬಾರಿನ ಒಳಗೆ
ತೂರಾಡುವುದು ಸರಿಯೆ ಭಾರತೀಯನಿಗೆ

ಬೇಕೇ ಬೇಕು ಬೇಕು ಬೇಕು

ಬೇಕೇ ಬೇಕು ಬೇಕು ಬೇಕು
ಬೇಕು ಬೇಕೆಂದೆನಿಸಿರಬೇಕು
ಲೋಕದಿ ಕಾಯಕ ಮಾಡಲೆ ಬೇಕು
ಯಾಕೆ ಸಾಕು ಬೇಕೆನಬೇಕು
ಸಾಕು ಬೇಕು ಲೆಕ್ಕವ ಹಾಕು
ತಕ್ಕಡಿಯೊಳಗೆ ತೂಕವ ಹಾಕು
ಬೇಕಿನ ತೂಕವ ತಾಕದು ಸಾಕು
ಲೋಕದಿ ಬೇಕಿಗೆ ಹಿಡಿಯದು ತುಕ್ಕು
ನಕ್ಕರೆ ಅಕ್ಟರೆ ಉಕ್ಕಲೆ ಬೇಕು
ದುಃಖವ ಬಿಕ್ಕಲಿ ನೂಕಲೆ ಬೇಕು
ಪುಕ್ಕಲು ತಿಕ್ಕಲು ಮುಕ್ಕಲು ಬೇಕು
ಸೊಕ್ಕಲಿ ಉಕ್ಕುವ ಹಕ್ಕಿನ ಬೇಕು
ತಕ್ಕವರಲ್ಲಿ ಸಖ್ಯವು ಬೇಕು
ಒಕ್ಕೂಟದಲಿ ಸೇರಿರಬೇಕು
ಸಿಕ್ಕುಗಳಲ್ಲಿ ಸಿಕ್ಕರೂ ಬೇಕು
ಸಿಕ್ಕಿದ ಸುಖಗಳ ನೆಕ್ಕಿರಬೇಕು
ಬೇಕು ಸಾಕೆಂದೆನುವರ ಹೊಕ್ಕು
ಸಾಕುತಲಿಹರು ಬೇಕಿನ ಬೆಕ್ಕು
ಪಕ್ಕನೆ ಉಕ್ಕುವ ಭಕ್ತಿಯಲಿಕ್ಕು
ಬೇಕಿನ ಬೆಕ್ಕಿಗೆ ಹಾಕುವ ಗುಟುಕು
ಚೊಕ್ಕಟ ಬೇಕನು ಹೆಕ್ಕಿ ಹುಡುಕು
ಮಿಕ್ಕವುಗಳನು ಪಕ್ಕಕೆ ಹಾಕು
ರೊಕ್ಕದ ಲೆಕ್ಕವು ಈ ಲೋಕಕೆ ಬೇಕು
ನಾಕದಿ ಸುಖಿಸಲು ಬೇರೆಯೆ ಬೇಕು

ಅವಳ ಮೋಹ............

ಹಾಲ ಕಡಲಿನಲಿ ಜನಿಸಿ ಬಂದವಳ
ಹಲಬಗೆ ನಲಿವಿಗೆ ಬಲವ ತರುವವಳ
ಚೆಲ್ಲು ಚೆಲುವಿಕೆಯ ಚಂಚಲೆಯಿವಳ 
ಒಲವೊಳಗುಳಿಯುವ ಹಂಬಲ, ತಳಮಳ
ಕಲಿತ ವಿದ್ಯೆಗೂ ಒಲಿವಳೆಂದಿಲ್ಲ.
ಕೆಲಸ ಕಾರ್ಯಗಳ ಗಮನಿಸಳಲ್ಲ,
ಫಲ ಕೊಡು ಎಂದು ಬೇಡುತ ಅವಳ
ಕಾಲು ಕೈ ಮುಗಿದರೂ ಬರುವಳೆಂದಿಲ್ಲ.
ಬಾಲೆಯ ಒಲಿಸಲು ಬೇಲಿಗಳಿಲ್ಲಾ
ಕಾಲು ಕೈ ಮುಗಿದರೂ ಸೋಲೇನಲ್ಲಾ
ಬೇಲಿಯೊಳಿರುವಾ ಕುಲಜರಿಗೆಲ್ಲಾ
ಒಲಿದು ಸಲಹುವಳೆಂಬ ಭರವಸೆಯಿಲ್ಲಾ.
ಒಲವ ಗೆಲಿದವರ ಬಾಲವ ಪಿಡಿದು
ಭಲೆ ಭಲೆ ಎಂದು ಗಳಿಸಲು ಬಹುದು
ಸಾಲವ ಪಾಲೋ ಏನೋ ಒಂದು
ಕೆಲಕಾಲ ನಲಿವಲಿ ಮುಳುಗಿರಬಹುದು.
ಬಲವಿರುವವರೆಗೆ ಸುಲಿಗೆಯ ಮಾಡಿ
ಕಾಲು ಮುರಿದವಳ ಒಳಗಡೆ ಕೂಡಿ.
ಸಲಹುವೆನೆಂದರೂ ನಿಲ್ಲದೆ ಓಡಿ
ಜೈಲೊಳಗಿಡುವಳು ಹಾಕಿಸಿ ಬೇಡಿ
ಬಲ್ಲವರಾಡಿದ ನುಡಿಯು ಸುಳ್ಳಲ್ಲ
ಇಲ್ಲಿರುವರೆವರೆಗೆ ಅವಳೇ ಎಲ್ಲಾ
ಕಾಲ ಕರೆದಾಗ ಅವಳು ಬರೊಲ್ಲ.
ಗೆಲ್ಲುವ ಛಲವನು ಬಿಡು ನೀ ಮರುಳ.
ನಲ್ಲನ ತೊರೆದು ಹೋದವಳವಳು
ಹುಲುಮಾನವನಲಿ ನಿಲ್ಲುವಳೇನು
ಹಿಂಬಾಲಿಸುವುದ ಬಿಡು ಅವಳನ್ನು
ಬಾಲೆಯೆ ಒಲಿಯಲಿ ಮೆಚ್ಚಿ ನಿನ್ನನ್ನು.
ಭಾಸ್ಕರ ಭಟ್ಟ

ಯುಗಾದಿ

ಹಳೆಯೆಲೆಯುದುರಿ ಎಳೆಪಲ್ಲವಿಸಲು ನಳನಳಿಸಿದೆ ಅವನಿ.
ತಳಿರುಗಳೆಡೆಯಲಿ ಫಲಿತ ಸಂಭ್ರಮದಲಿ
ಮೇಳೈಸಿಹವು ಹಕ್ಕಿದನಿ.
ಸೊಂಪು ನೀರಿನಲು ತಂಪು ಗಾಳಿಯಲು
ಕಂಪು ಬೀರದ ಹಸಿರು.
ಸುಡುವ ಬಿಸಿಲಿನಲಿ ಬೆಡಗು ತೋರುತಿದೆ
ಮಡಿಲ ತುಂಬುತಿದೆ ಬಸಿರು
ವಸುಧೆ ಹಸಿಯುತಿದೆ ಬೆಸೆದ ಬೇರಿಗೆ
ಆಸೆ ತೃಷೆಯ ಘಳಿಗೆ
ಹಸಿರಿನೆಲೆಗಳಿಗೆ ಖುಷಿಗಳೇತಕೋ
ಉಸಿರ ಹಿಡಿದಿರಲೇ ನಾಳೆಗೆ?
ಬೆಲ್ಲವನುಣುವಾಗ ಬೇವಿನಂತಿದ್ದವಳು
ಬೆಲ್ಲವುಣಿಸಿದಳು ಬೇವುಂಡು
ಬಲ್ಲವರೆದೆಯಲ್ಲಿ ಚೆಲ್ಲಿದ ರಂಗೋಲಿ
ಎಲ್ಲರು ಕಲಿಯಲಿ ಕಂಡು. 

ಕಥಾಕಾಲಕ್ಷೇಪ

ಅಂತವರಿಂತವರು ನಿಂತವರೆಂತವರು ಅಂತೆ ಕಂತೆ ಶುರು ಮಂಥನ ಬಲು ಜೋರು ಪಂಥಕೆ ಇಳಿವವರ್ಯಾರು ಚಿಂತೆಯೊಳಿಳಿದಿಹರಿವರು ಕುಂತರೂ ನಿಂತರೂ ಶುರು ಚಿಂತಕರಾಗಿಹರೀ ಜನರು ಹಣವನು ಚೆಲ್...